ಖೆಡೀವ್ -
ತುರ್ಕಿಯ ಸುಲ್ತಾನ (1867)ರಲ್ಲಿ ಈಜಿಪ್ಟಿನ ಇಸ್ಮಾಯಿಲ್ ಪಾಷಾಗೆ ಕೊಟ್ಟ ಬಿರುದು. ಖೆಡೀವ್ ಎಂಬುದು ಪಾರಸಿ ಭಾಷೆಯ ಶಬ್ದ. ಪ್ರಭು ಅಥವಾ ರಾಜಕುಮಾರ ಎಂದು ಇದರ ಅರ್ಥ. ಇಸ್ಮಾಯಿಲನೂ ಅವನ ಅನಂತರ ಬಂದ ಅಹಮದ್ ಟೆವ್‍ಫೀಕ್ ಮತ್ತು (2)ನೆಯ ಅಬ್ಬಾಸ್ ಹಿಲ್ಮಿ ಇವರೂ ಇದನ್ನು ಧರಿಸಿದ್ದರು. ಖೆಡೀವರದು ಅಲ್ಬೇನಿಯಮ್ ವಂಶ. ಈಜಿಪ್ಷಿಯನರು ಅವರನ್ನು ತುರ್ಕಿ ವಂಶದವರೆಂದೇ ಬಗೆದಿದ್ದರು. ಪಾಷಾಗಳು ತುರ್ಕಿ ಸುಲ್ತಾನನ ಮಾಂಡಲಿಕರಂತೆ ರಾಜ್ಯವಾಳುತ್ತಿದ್ದರು. (1914)ರಲ್ಲಿ ಈಜಿಪ್ಟಿನ ಮೇಲೆ ತುರ್ಕಿಯ ಪ್ರಭುತ್ವ ಕೊನೆಗೊಂಡಾಗ ಖೆಡೀವ್ ಬಿರುದನ್ನು ಬ್ರಿಟಿಷರು ರದ್ದುಪಡಿಸಿದರು. ಈಜಿಪ್ಟ್ ಬ್ರಿಟನ್ನಿನ ಅರಕ್ಷಿತ ದೇಶವಾಯಿತು. ಅಲ್ಲಿಯ ದೊರೆ ಸುಲ್ತಾನ್ ಎನಿಸಿಕೊಂಡ, ಸ್ವತಂತ್ರ್ಯಕ್ಕಾಗಿ ಈಜಿಪ್ಟಿನ ವಾಫ್ದ್ ಪಕ್ಷ ನಡೆಸಿದ ಚಳವಳಿಯ ಫಲವಾಗಿ ಆತ (1923)ರಲ್ಲಿ ಸಂವಿಧಾನಬದ್ಧ ದೊರೆಯಾದ.			(ಎಂ.ಪಿ.; ಎಂ.ಕೆ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ